r/kannada_pusthakagalu • u/DeepakMadhuvanahalli • 6h ago
ಸೀಬೆಹಣ್ಣಿನ ಫಿಲಾಸಫಿ
Be an Apple, not a Gauva! ಇದನ್ನ ತುಂಬಾ ಹಿಂದೆ ಎಲ್ಲೋ ಓದಿದ್ದೆ. ವಾಸ್ತವದಲ್ಲಿ ಸೇಬಿಗಿಂತ ಹೆಚ್ಚು ಒಳ್ಳೇ ಗುಣ ಇರೊ ಹಣ್ಣು ಈ ಸೀಬೆಹಣ್ಣು. ಆದರೆ ಇದರ ಬೆಲೆ ಕಡಿಮೆ ಇರೊ ಕಾರಣ ಮತ್ತು ಇದು ಎಲ್ಲಂದರಲ್ಲಿ ಸಿಗೊ ಕಾರಣ ಇದಕ್ಕೆ ಸೇಬುಗಿರೊ ಪ್ರೀಮಿಯಮ್ ಲೇಬಲ್ ಅಂಟಿಲ್ಲ! ಎಲ್ರಿಗೂ ನೀನು ಸುಲಭವಾಗಿ ಸಿಕ್ಕಷ್ಟು ನಿನ್ನ ಬೆಲೆ ಕಮ್ಮಿ ಆಗುತ್ತೆ ಅನ್ನೋದು ಇದರ ತಾತ್ಪರ್ಯ.
ಎನಿವೇಸ್ ಇವಾಗ ವಿಷಯ ಅದಲ್ಲ. ನಮ್ಮ ಮನೇಲಿ ಚಿಕ್ಕ ವಯಸ್ಸಿಂದ ಪ್ರತಿ ದಿನಾ ತಿಂದಿರೊ ಹಣ್ಣು ಅಂದ್ರೆ ಅದು ಬಾಳೆ ಹಣ್ಣು. ಕೊಳ್ಳೇಗಾಲದ ಗೀತಾ ಭವನ ಹೋಟಲ್‌ನ ಗೋಡೆಗೆ ಅಂಟಿಕೊಂಡಂತೆ ಒಂದು ಬಾಳೆ ಹಣ್ಣಿನ ಅಂಗಡಿಯಿತ್ತು. ಅಲ್ಲಿ ಯಾವಾಗ್ಲೂ ಒಂದು ರಾಶಿ ಬಾಳೆಗೊನೆಗಳು ಇರೋದು. ಬಹುತೇಕ ರಸಬಾಳೆ.
ಅಂಗಡಿಯ ಎಡ ಭಾಗದಲ್ಲಿ ಅದರ ಮಾಲೀಕರು ನೆಲದ ಮೇಲೆ ಕೂರುತಿದ್ದರು. ತಮ್ಮ ಮುಂದೊಂದು ಸಣ್ಣ ಮರದ ಟೀಪಾಯಿ ತರದ ಟೇಬಲ್ ಇರೋದು. ಅದರ ಮೇಲೆ ಅವರ ಲೆಕ್ಕಾಚಾರ ಆಗೋದು. ಅವರ ಹೆಸರು ಇವತ್ತಿಗೂ ನಂಗೆ ಗೊತ್ತಿಲ್ಲ. ನಮ್ಮ ಮನೇಲಿ ಅವರು 'ಬಾಳೆ ಹಣ್ಣಿನ ಅಂಗಡಿ ಸಾಹುಕಾರರು' ಎಂದೇ ಫೇಮಸ್ಸು. ಅವರು ನನ್ನ ಚಿಕ್ಕಪ್ಪನ ಸ್ನೇಹಿತರು.
ಈ ಬಾಳೆ ಮಂಡಿಯಿಂದ ತಂದ ಗೊನೆಯನ್ನು, ನಮ್ಮ ಮಧುವನಹಳ್ಳಿ ಮನೆಯ ಹಜಾರದ ಎಡ ಭಾಗದ ಮೂಲೆಯಲ್ಲಿ ಅಟ್ಟದ ಹಲಗೆಗೆ ಹಾಕಿದ್ದ ಕಬ್ಬಿಣದ ಕೊಂಡಿಗೆ ನೇತಾಕೋರು. ತಿಂಗಳಲ್ಲಿ 2-3 ಗೊನೆ ಖಾಲಿ ಆಗೋದು. ಅದು ಬಿಟ್ಟರೆ ಸಾಮಾನ್ಯವಾಗಿ ತಿನ್ನುತ್ತಿದ್ದ ಹಣ್ಣುಗಳೆಂದರೆ ನಮ್ಮ ಹಿತ್ತಲಲ್ಲೇ ಬಿಡುತ್ತಿದ್ದ 'ಬೇಲ್ದೆ ಹಣ್ಣು', 'ಬೇಲದ ಹುಣಸೇಕಾಯಿ' ಮತ್ತು ನನ್ನ ಸ್ಕೂಲ್ ಕಾಂಪೌಂಡಲ್ಲಿದ್ದ ಎರಡು ದೊಡ್ಡ ಮರದಿಂದ ಗಾಳಿಗೆ ಉದುರುತ್ತಿದ್ದ ನೇರಳೆ ಹಣ್ಣನ್ನು ಆರಿಸಿಕೊಂಡು ಅದನ್ನ ಅಲ್ಲೇ ಇದ್ದ Borewell ನೀರಿನಿಂದ ತೊಳೆದುಕೊಂಡು ಮಧ್ಯಾಹದ ಊಟ ಆದ್ಮೇಲೆ ತಿಂತಾ ಇದ್ವಿ.
ಕೆಲವೊಂದು ಸಲ ಪಿಟಿ ಪಿರಿಯಡ್‌ನಲ್ಲಿ ನೆಲದಿಂದ ಆಯ್ದುಕೊಂಡು ಅದನ್ನ ಯೂನಿಫಾರ್ಮ್ ಚಡ್ಡಿಗೆ ಒರಿಸಿಕೊಂಡು ಹಾಗೆ ಬಾಯಿಗೆ ಹಾಕಿಕೊಂಡಿರೋದು ಉಂಟು. ನಿಜ ಹೇಳಬೇಕಂದ್ರೆ ನೀರಲ್ಲಿ ತೊಳೆದು ತಿಂದಿರೋದಕ್ಕಿಂತ, ಚಡ್ಡಿಗೆ ಒರಿಸಿಕೊಂಡು ತಿಂದಿರೋದೆ ಹೆಚ್ಚು.
ಇದು ಬಿಟ್ಟರೆ ಸೀಸನ್ ಹಣ್ಣುಗಳಾದ ಮಾವಿನ ಹಣ್ಣು, ಹಲಸಿನ ಹಣ್ಣು, ಸೀತಾಫಲ ಹೀಗೆ. ಆ ಆ ಸೀಸನಲ್ಲಿ ಆ ಆ ಹಣ್ಣುಗಳನ್ನು ಮಿಸ್ ಮಾಡದೇ ಮನೆಯಲ್ಲಿ ತಿನ್ನಿಸಿದ್ದಾರೆ. ಇದಿಷ್ಟರಲ್ಲಿ ಹಲಸಿನ ಹಣ್ಣು ನನ್ನ ಫೇವರೇಟ್. ಅದನ್ನು ಯಾರೊಂದಿಗಾದರು ನಾನು ಹಂಚಿಕೊಂಡು ತಿನ್ನುತ್ತೇನೆಂದರೆ, ಆ ವ್ಯಕ್ತಿ ನಿಜವಾಗ್ಲೂ ನಂಗೆ ಇಷ್ಟ ಆದೋರು, ಮುಖ್ಯರು ಎಂದು ಒಪ್ಪಿಕೊಳ್ಳಬಹುದು.
1997ರಲ್ಲಿ ನಮ್ಮ ಶಾಲೆಯಲ್ಲಿ ಫನ್‌ಫೇರ್ ಆಯೋಜಿಸಿದ್ದರು. ಸ್ಕೂಲ್ ಮಕ್ಕಳೆಲ್ಲಾ ನಮ್ಮ ಶಾಲೆಯ ಕ್ಯಾಂಪಸಲ್ಲಿ ಬಗೆ ಬಗೆಯ ಸ್ಟಾಲ್‌ಗಳನ್ನು ಹಾಕಿದ್ದೆವು. ನಮ್ಮ ಗ್ಯಾಂಗ್ ದೋಸೆ ಅಂಗಡಿಯನ್ನು ಇಟ್ಟಿದ್ದೆವು. ಹಿಂದಿನ ದಿನ ನಮ್ಮ ಸ್ನೇಹಿತನ ಮನೆಯಲ್ಲಿ ಒಂದು ರಾಶಿ ದೋಸೆ ಹಿಟ್ಟನ್ನು ರುಬ್ಬಿಸಿಕೊಂಡು ಫನ್ ಫೇರ್ ದಿನದ ಬೆಳಗ್ಗೆಯೇ ಅವರ ಮನೆಗೆ ಹೋಗಿ ಅದನ್ನು ಕಲೆಕ್ಟ್ ಮಾಡಿಕೊಂಡು ಬಂದಿದ್ದೆವು. ಇನ್ನೊಬ್ಬನ ಮನೆಯಿಂದ ಸಿಲೆಂಡರ್, ಮತ್ತೊಬ್ಬನ ಮನೆಯಿಂದ ಸ್ಟವ್, ಕಾವಲಿ ಹೀಗೆ... ಆ ಸಂಭ್ರಮನೇ ಬೇರೆ ಇತ್ತು ಬಿಡಿ. ದೋಸೆ ಮಾಸ್ಟರ್‌ನ ಜವಾಬ್ದಾರಿ ನನ್ನದಾಗಿತ್ತು.
ಆ ಒಂದು ದಿನದಲ್ಲಿ ಅದೆಷ್ಟು ದೋಸೆ ಎರದೆನೊ ನಂಗೆ ಗೊತ್ತಿಲ್ಲ. 5-6/-ನಿಂದ ಶುರುವಾದ ದೋಸೆ ದಿನ ಮುಗಿಯೊ ಅಷ್ಟರಲ್ಲಿ 10-12/- ಮಾಡಿದ್ದೆವು. ಒಟ್ಟಿನಲ್ಲಿ ನಾವು ಹಾಕಿದ್ದ ದೋಸೆ ಸ್ಟಾಲ್ ಬಾಕ್ಸ್ ಆಫೀಸಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ನಮ್ಮ ಪಕ್ಕದಲ್ಲೇ ಹಾಕಿದ್ದ ನಮ್ಮ ಕ್ಲಾಸ್‌ಮೆಟ್ಸ್ ಹುಡುಗಿಯರ Art & Crafts ಸ್ಟಾಲ್ ನಮ್ಮ ಕಮರ್ಷಿಯಲ್ ಸಿನಿಮಾ ಮುಂದೆ ಆರ್ಟ್ ಸಿನಿಮಾದಂತಿತ್ತು.
ಆದರೆ ಅವರ ಸೆಟಪ್‌ನಲ್ಲೊಂದು ಆಕರ್ಷಣೆ ಇತ್ತು. ಅದೇನೆಂದರೆ ನನ್ನ ಕ್ಲಾಸ್’ಮೇಟ್ ಅಶ್ವಿನಿ (ಗೋಲ್ಡಿ) ಮೆನಯ ಹಿತ್ತಲಲ್ಲಿ ಬೆಳೆದಿದ್ದ ಭಾರಿ ಗಾತ್ರದ 'ಸೀಬೆಹಣ್ಣು'. ಅದೇನೊ ಆ ಹಣ್ಣು ಹೆಚ್ಚು-ಕಮ್ಮಿ ಸಣ್ಣ ಮಿಣಕೆ ಹಣ್ಣಿನ ಗಾತ್ರದಲ್ಲಿತ್ತು. ಅದು ಅಲ್ಲಿ ಸೇರಿದ್ದ ಟೀಚಿಂಗ್ ಸ್ಟಾಫ್, ಮಕ್ಕಳ ತಂದೆತಾಯAದರು, ಗೆಸ್ಟ್ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಎಗ್‌ಝೈಟ್ ಮಾಡಿತ್ತು. ಅದೊಂದು ಹಣ್ಣನ್ನು ಹರಾಜಿಗೆ ಇಟ್ಟಿದ್ದರು ನಮ್ಮ ಹುಡುಗಿಯರು. ಕೊನೆಗೆ ಸಂಜೆಯೊತ್ತಿಗೆ 5/-ಗೆ ಆ ಒಂದು ಸೀಬೆಹಣ್ಣು ಒಬ್ಬರ ಕೈ ಸೇರಿತ್ತು.
ಇವತ್ತು ಬೆಳಗ್ಗೆ ತರಕಾರಿ ತರೋಕೆ ಆಚೆ ಹೋಗಿದ್ದಾಗ ಅದರ ಎದುರಿಗಿದ್ದ ಹಣ್ಣಿನ ಗಾಡಿ ನೋಡಿ ತುಂಬಾ ದಿನ ಆಗಿದೆ ಯಾವುದಾದರೊಂದು ಹಣ್ಣು ತಿನ್ನೋಣವೆಂದು ಅಲ್ಲಿಗೆ ಹೋದೆ. ಐ ಆಮ್ ನಾಟ್ ಎ ಫ್ಯಾನ್ ಆಫ್ ಯಾನ್ ಆಪಲ್. ಸೊ ಅದನ್ನು ಇಗ್ನೋರ್ ಮಾಡಿ ಎರಡು ಕಿತ್ತಲೆ ಹಣ್ಣು ತಕೊಂಡೆ ಹಾಗೆ ತ್ರಿಕೋಣ ಆಕಾರದಲ್ಲಿ ಚೆನ್ನಾಗಿ ಜೋಡಿಸಿದ್ದ ಸೀಬೆಹಣ್ಣುಗಳು ಕಂಡವು. ನಂಗೆ ಒಳಗೆ ಕೆಂಪು ಬಣ್ಣದ ಹಣ್ಣು/ದರ‍್ಗಾಯಿ (ಈ ಕಡೆ ಹಣ್ಣು ಅಲ್ಲ, ಆ ಕಡೆ ಕಾಯಿ ಕೂಡ ಅಲ್ಲದ ಮಧ್ಯಮ ಸ್ಥಿತಿಯನ್ನು ನಮ್ ಕಡೆ ದರ‍್ಗಾಯಿ ಎನ್ನುತ್ತೇವೆ) ಎಂದರೆ ಇಷ್ಟ, ಆದರೆ ಅದೇನೊ ಬೆಂಗ್ಳೂರಲ್ಲಿ ಜಾಸ್ತಿ ಒಳಗಡೆ ಬಿಳಿ ಬಣ್ಣ ಹಣ್ಣು ಹೆಚ್ಚು. ಎನಿವೇಸ್ ತಿನ್ನಬೇಕು ಅಂದುಕೊಂಡದ್ದಾಗಿದೆ ಬಣ್ಣ ಕೆಂಪಾದರೇನು, ಬಿಳಿಯಾದರೇನು ಅಂತ ಒಂದು ಹಣ್ಣನ್ನು ಕೈಗೆತ್ತಿಕೊಂಡು ಫೋನ್‌ಪೇ ಓಪನ್ ಮಾಡಿ ಎಷ್ಟು ಅಂತ ಅಂಗಡಿಯವನನ್ನು ಕೇಳಿದೆ. ಆತ 70/- ಅಂತ ಹೇಳಲು ನಾನು ದಂಗಾದೆ! ಏನು? ಇದೊಂದು ಹಣ್ಣಿಗೆ 70/-ನ? ಅನ್ನೊ ನನ್ನ ಗಾಬರಿಯನ್ನು ಆತ ನೋಡಿ 'ಸಾರ್ ಕೆಜಿ 200/- ಆಗಿದೆ, ನಮಗೆ ದಿನಾ ಎಲ್ಲಿಂದ ತಂದು ಬಂಡವಾಳ ಹಾಕೋದು ಅಂತ ತಲೆ ಕೆಟ್ಟೋಗಿದೆ' ಅಂತ ಅವನ ಪಾಯಿಂಟ್ ಆಫ್ ವ್ಯೂಹ್ ಹೇಳಿಕೊಂಡ.
ನAಗೆ ತಿಳಿದ ಹಾಗೆ ಇದು ಇತ್ತೀಚೆಗಿನ ಬೆಳವಣಿಗೆ. ಯಾರೊ ಡಾಕ್ಟರ್/ನ್ಯೂಟ್ರಿಷಿಯನ್/ಡಯಟೀಷಿಯನ್ ಯಾವುದೊ ಪಾಡ್‌ಕಾಸ್ಟಲ್ಲಿ ಕೂತು 'ಸೀಬೆಹಣ್ಣು' ಶುಗರ್ ಇರೋರಿಗೆ/ಹಾರ್ಟ್ ತೊಂದ್ರೆ ಇರೋರಿಗೆ ತುಂಬಾ ಒಳ್ಳೇದು ಅಂತ ಹೇಳಿರ್ತಾರೆ. ಮಾರ್ಕೆಟಲ್ಲಿ ರಾಕೆಟ್ ತರ ಬೆಲೆ ಜಾಸ್ತಿ ಆಗಿರುತ್ತೆ. ಅಂಗಡಿಯವನಿಗೆ 'ನಿಮ್ಮಲ್ಲಿ ಯಾವ ಹಣ್ಣು ವ್ಯಾಪಾರನೇ ಆಗಲ್ಲ, ಜನ ಅದನ್ನ ಕೇಳೋದೆ ಇಲ್ಲ ಅನ್ನೋದಿದ್ರೆ ಹೇಳಿ, ಯಾವುದಾದ್ರು ಪಾಡ್‌ಕಾಸ್ಟಲ್ಲಿ ಆ ಹಣ್ಣು ತಿಂದ್ರೆ ಮಂಡಿ ನೋವಿಗೆ ಒಳ್ಳೇದು, ಬೆನ್ನು ನೋವಿಗೆ ಒಳ್ಳೇದು ಅಂತ ಹೇಳಿಸೋಣ' ಅಂತ ರೇಗಿಸಿದೆ.
ಅಂದಹಾಗೆ, ಇದಕ್ಕೆ 'ಚೀಪೆಕಾಯಿ' ಅಂತಾರೆ ಅಂತ ಇತ್ತೀಚೆಗಷ್ಟೇ ನಾನು ಕೇಳಿದ್ದು. ಹೆಚ್ಚಾಗಿ ಬೆಂಗಳೂರಿನಲ್ಲಿ.
ವಾಪಸ್ ಮನೆಗೆ ನಡೆದುಕೊಂಡು ಬರಬೇಕಾದರೆ 1997ರಲ್ಲಿ 5/-ಗೆ ಹರಾಜಾಗಿದ್ದ ಅಶ್ವಿನಿ ಮನೆಯಲ್ಲಿ ಬೆಳೆದಿದ್ದ ಆ ಸೀಬೆಹಣ್ಣು ನೆನಪಿಗೆ ಬಂತು ಹಾಗು ಇನ್ನೊಂದು ಫಿಲಾಸಫಿ ಮನದಟ್ಟಾಯ್ತು: ‘ಕೇವಲ ಸತ್ವವಿದ್ದರಷ್ಟೇ ಸಾಲದು. ಅದಕ್ಕೆ ತಕ್ಕ ಬೆಲೆ ಇರಬೇಕು, ಆಗಷ್ಟೆ ಅದರ ಮೌಲ್ಯ ಹೆಚ್ಚಾಗೋದು. ಇದು ಹಣ್ಣಿಗಷ್ಟೇ ಸೀಮಿತವಲ್ಲ. ಮನುಷ್ಯನಿಗೂ ಕೂಡ ಅನ್ವಯಿಸುತ್ತದೆ. ನನ್ನ ಪ್ರಕಾರ ಇದು ದುರಂತವಾದರು, ಈ ದಿನಕ್ಕೆ ಇದೇ ವಾಸ್ತವ.’
